ಹುಬ್ಬಳ್ಳಿ: ನಗರದ ಲೋಹಿಯಾನಗರ ಹಾಳು ಕೆರೆಯ ಬದಿಯಲ್ಲಿರುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಮಳೆ ನೀರು ಜಮಾವಣೆಗೊಂಡಿರುವ ಕಾರಣ ಸ್ಥಳೀಯ ನಿವಾಸಿಗಳು ಮನೆಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯಲ್ಲಿ ನೀರು ನಿಂತಿರುವುದರಿಂದ ಮಕ್ಕಳು, ವೃದ್ಧರು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ, ಶಾಶ್ವತ ಪರಿಹಾರಕ್ಕಾಗಿ ಕೂಡಲೇ ಚಿಕ್ಕ ಸೇತುವೆ (ಬ್ರಿಜ್) ನಿರ್ಮಿಸಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

