ಹುಬ್ಬಳ್ಳಿ : ಆಸಾರ ಓಣಿಯ ರಸ್ತೆ ನವೀಕರಣ ಕಾಮಗಾರಿಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಸತ್ಯವನ್ನು ಮರೆಮಾಚಿ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವವರ ವಿರುದ್ಧ ಸಮತಾ ಸೇನಾ ಕರ್ನಾಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮತಾ ಸೇನಾ ಕರ್ನಾಟಕದ ಮುಖಂಡರು, ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿರುವ ಸ್ಥಳವು ಸಂಪೂರ್ಣ ವಾಲಿಕೆ ಒಡೆತನಕ್ಕೆ ಒಳಪಟ್ಟ ಜಾಗೆಯಾಗಿದ್ದು, 1985ರಲ್ಲಿಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಪ.ಜಾ./ಪ.ಪಂ. ಪೌರಕಾರ್ಮಿಕರಿಗೆ ಶೇ.18ರ ಅನುದಾನದಡಿ 22 ಜನತಾ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಈ ಮನೆಗಳಿಗೆ ಸುಮಾರು 40 ವರ್ಷಗಳ ಇತಿಹಾಸವಿದ್ದು, ಈಗಾಗಲೇ ಒಳಚರಂಡಿ, ಚರಂಡಿ, ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ಅವಳಿ ನಗರದ ಅಭಿವೃದ್ಧಿಯ ಇತಿಹಾಸವನ್ನು ಗಮನಿಸಿದರೆ, ಸಾರ್ವಜನಿಕ ಹಾಗೂ ಜನಪರ ಮೂಲಭೂತ ಸೌಲಭ್ಯಗಳಿಗಾಗಿ ಈ ಹಿಂದೆ ಹಲವು ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ನೆಹರೂ ಕ್ರೀಡಾಂಗಣ, ಐಟಿ ಪಾರ್ಕ್, ಹೆಗಡೆ ಕೆರೆ, ಮೂರುಸಾವಿರ ಮಠದ ಕೆರೆ, ಬಾಫ್ರಾ ಲೇಔಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಸತಿ, ಶಿಕ್ಷಣ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ ನಿರ್ಮಾಣ ಕಾರ್ಯಗಳು ನಡೆದಿವೆ. ಸಿದ್ದಾರೂಢ ಮಠದ ಅಗಸರ ಹೊಂಡ, ಅಕ್ಕಿಹೊಂಡ ಸೇರಿದಂತೆ ಹಲವು ಪ್ರದೇಶಗಳು ಕಾಲಕ್ರಮೇಣ ಜನವಸತಿ ಪ್ರದೇಶಗಳಾಗಿ ಪರಿವರ್ತನೆಯಾಗಿವೆ. ನಗರದ ಹಲವು ಭಾಗಗಳ ಮೂಲ ದಾಖಲೆಗಳನ್ನು ಪರಿಶೀಲಿಸಿದರೆ ಹಿಂದಿನ ಕೆರೆ-ಹೊಂಡ ಪ್ರದೇಶಗಳಲ್ಲಿಯೇ ನಗರೀಕರಣ ನಡೆದಿರುವುದು ಕಂಡುಬರುತ್ತದೆ ಎಂದು ಹೇಳಿದರು. ಕಳೆದ ಕೆಲವು ದಿನಗಳಿಂದ ಕೆಲವರು ನೈಜ ವಿಚಾರಗಳನ್ನು ಮರೆಮಾಚಿ, ಸಮಾಜದಲ್ಲಿ ಗೊಂದಲ ಹಾಗೂ ಶಾಂತಿಭಂಗ ಉಂಟುಮಾಡುವಂತಹ ಸುಳ್ಳು ವಿಚಾರಗಳನ್ನು ಹರಡುತ್ತಿರುವುದು ಖಂಡನೀಯ ಎಂದು ಸಮತಾ ಸೇನಾ ಕರ್ನಾಟಕ ಆರೋಪಿಸಿದೆ. ವಿಶೇಷವಾಗಿ ಆಸಾರ ಓಣಿ ಸಮೀಪದ ಶ್ರೀ ಭವಾನಿ ಶಂಕರ ದೇವಸ್ಥಾನಕ್ಕೆ ಸಂಬಂಧಿಸಿದ ಸಿಟಿಎಸ್ ನಂ. 3789ರ ಜಾಗದಲ್ಲಿ ಕೆರೆ ಅಥವಾ ಪುಷ್ಕರಣಿ ಇದೆ ಎಂದು ಸುಳ್ಳು ಮಾಹಿತಿ ಹರಡಲಾಗುತ್ತಿದೆ. ಆದರೆ ಈ ಕುರಿತು ಪುರಾತತ್ವ ಇಲಾಖೆಯ ಪರಿಶೀಲನೆ ಹಾಗೂ ದಾಖಲೆಗಳ ಪ್ರಕಾರ ಸದರಿ ಸ್ಥಳದಲ್ಲಿ ಯಾವುದೇ ಕೆರೆ ಅಥವಾ ಪುಷ್ಕರಣಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ ಎಂದು ಸಮತಾ ಸೇನಾ ಕರ್ನಾಟಕ ತಿಳಿಸಿದೆ. ಪುರಾತತ್ವ ಇಲಾಖೆಯ ಸ್ಪಷ್ಟನೆ ಇದ್ದರೂ ಇಲ್ಲದ ವಿಚಾರವನ್ನು ಮುಂದಿಟ್ಟುಕೊಂಡು ಮತ್ತೊಂದು ವಿವಾದ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಯಾವುದೇ ರಸ್ತೆ ನಿರ್ಮಿಸಬಾರದು ಎಂದು ಅಧಿಕಾರಿಗಳ ಮೇಲೆ ಒತ್ತಡ, ದಬ್ಬಾಳಿಕೆ ಹಾಗೂ ಬಲವಂತದ ತಂತ್ರಗಳನ್ನು ಬಳಸುವ ಮೂಲಕ ಜನಪರ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುವುದನ್ನು ಸಮತಾ ಸೇನಾ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಮುಖಂಡರು ಹೇಳಿದರು. ಸ್ಥಳೀಯ ನಿವಾಸಿಗಳ ಹಲವು ವರ್ಷಗಳ ಬೇಡಿಕೆಯ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರ ಕೋರಿಕೆಯಂತೆ ನಿಯಮಾನುಸಾರ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಸಮತಾ ಸೇನಾ ಕರ್ನಾಟಕ ಪರಿಶೀಲನೆಯ ನಂತರ ಮನಗಂಡಿದೆ. ಆದ್ದರಿಂದ ಮಹಾನಗರ ಪಾಲಿಕೆಯ ಈ ಜನಪರ ಕ್ರಮವನ್ನು ಸ್ವಾಗತಿಸುತ್ತೇವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು. ಅಲ್ಲದೇ ಆಸಾರ ಓಣಿಯ ಜನತಾ ಮನೆಗಳ ನಿವಾಸಿಗಳಿಗೆ ಅಗತ್ಯವಿರುವ ಕುಡಿಯುವ ನೀರು, ಒಳಚರಂಡಿ, ರಸ್ತೆ, ಸ್ವಚ್ಛತೆ ಸೇರಿದಂತೆ ಇತರ ಮೂಲಭೂತ ಸಮಸ್ಯೆಗಳಿಗೂ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಯಾವುದೇ ಕೆರೆ, ಹೊಂಡ ಅಥವಾ ಪುಷ್ಕರಣಿ ಇದೆ ಎಂಬ ಸುಳ್ಳು ಮಾಹಿತಿಯನ್ನು ಹರಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ಶಾಂತಿಭಂಗಕ್ಕೆ ಕಾರಣವಾಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜನಪರ ಅಭಿವೃದ್ಧಿ ಕಾರ್ಯಗಳಿಗೆ ಧಾರ್ಮಿಕ ಅಥವಾ ಕೋಮುವಾದದ ಹೆಸರಿನಲ್ಲಿ ಅಡ್ಡಿಪಡಿಸುವ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು ಎಂದು ಸಮತಾ ಸೇನಾ ಕರ್ನಾಟಕ ಆಗ್ರಹಿಸಿದೆ.

