ಹುಬ್ಬಳ್ಳಿ : ಆಸಾರ ಓಣಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿಚಾರದ ಕುರಿತು ಬಿಜೆಪಿ ಮುಖಂಡ ಶಶಿಕಾಂತ ಬಿಜ್ವಾಡ್ ಅವರು ಪ್ರತಿಕ್ರಿಯಿಸಿದ್ದು, ಯಾವುದೇ ರೀತಿಯ ಗೊಂದಲ ಅಥವಾ ಕೋಮು ಸಂಘರ್ಷಕ್ಕೆ ಅವಕಾಶ ನೀಡದೆ, ಎರಡೂ ಬಣಗಳ ಅಭಿಪ್ರಾಯ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಭಾರತ ದೇಶ ಭಾವೈಕ್ಯತೆಯ ರಾಷ್ಟ್ರವಾಗಿದ್ದು, ನಾವೆಲ್ಲರೂ ಅಣ್ಣತಮ್ಮಂದಿರಂತೆ ಬದುಕಬೇಕು. ಇಲ್ಲಿ ಯಾವುದೇ ರೀತಿಯ ಜಾತಿ ಅಥವಾ ಕೋಮು ಭೇದಕ್ಕೆ ಅವಕಾಶ ಇರಬಾರದು. ಆಸಾರ ಓಣಿ ವಿಚಾರದಲ್ಲಿ ಎರಡು ಬಣಗಳ ಮಾತುಗಳನ್ನು ಸಮಾನವಾಗಿ ಪರಿಶೀಲನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು. ಸ್ಥಳೀಯ ಕಾರ್ಪೊರೇಟರ್ ಅವರ ಅಭಿಪ್ರಾಯದ ಜೊತೆಗೆ ಹಿಂದೂಪರ ಸಂಘಟನೆಗಳ ಮನವಿಯನ್ನೂ ಪರಿಗಣಿಸಬೇಕು. ಸ್ಥಳದಲ್ಲಿ ಪುರಾತತ್ವ ಮಹತ್ವದ ಯಾವುದೇ ಅವಶೇಷಗಳು ಅಥವಾ ಐತಿಹಾಸಿಕ ಕುರುಹುಗಳು ಕಂಡುಬಂದಿವೆಯೇ ಎಂಬುದನ್ನು ಪರಿಶೀಲಿಸಬೇಕು. ಅದೇ ರೀತಿ ಸ್ಥಳೀಯ ಜನರಿಗೆ ರಸ್ತೆ ಅತ್ಯಗತ್ಯವಾಗಿದ್ದರೆ, ಸಾರ್ವಜನಿಕರ ಅಗತ್ಯವನ್ನೂ ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಶಶಿಕಾಂತ ಬಿಜ್ವಾಡ್ ತಿಳಿಸಿದರು. ಈ ವಿಚಾರದಲ್ಲಿ ಸದ್ಯ ಯಾವುದೇ ರೀತಿಯ ಕೋಮು ಗಲಭೆ ಅಥವಾ ಸಂಘರ್ಷದ ಪರಿಸ್ಥಿತಿ ಇಲ್ಲ. ಆದರೆ ಸಂಪೂರ್ಣ ವಿಚಾರ ತಿಳಿದುಕೊಳ್ಳದೆ ಮಾತನಾಡುವವರು ಹಾಗೂ ಗೊಂದಲ ಸೃಷ್ಟಿಸುವವರಿಂದ ಜನರಲ್ಲಿ ತಪ್ಪು ಸಂದೇಶ ಹೋಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು. ಎಲ್ಲಾ ದಾಖಲೆಗಳು ಹಾಗೂ ಸಂಬಂಧಪಟ್ಟ ವಿಚಾರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮೇಯರ್ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಈ ಕುರಿತು ಉಪಯುಕ್ತ ಸಭೆಯೂ ನಡೆದಿದೆ ಎಂದು ಹೇಳಿದರು. ಮುಂದಿನ ಗುರುವಾರ ಮತ್ತೊಂದು ಸಭೆ ನಡೆಸಿ, ಸಂಬಂಧಪಟ್ಟ ಎಲ್ಲರ ಅಭಿಪ್ರಾಯಗಳನ್ನು ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಯಾರಿಗೂ ಅನ್ಯಾಯವಾಗದಂತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಉದ್ದೇಶ ಎಂದು ಬಿಜೆಪಿ ಮುಖಂಡ ಶಶಿಕಾಂತ ಬಿಜ್ವಾಡ್ ಸ್ಪಷ್ಟಪಡಿಸಿದರು.

