ಹುಬ್ಬಳ್ಳಿ: ಆಸಾರ ಓಣಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇಂದು ಮುಂಜಾನೆ ಆಸಾರ ಓಣಿ ಪ್ರದೇಶಕ್ಕೆ ಮತ್ತೆ ಕೆಲ ಸಂಘಟನೆಯವರು ಪರಿಶೀಲನೆ ಹಾಗೂ ಸರ್ವೇ ನಡೆಸುವ ಉದ್ದೇಶದಿಂದ ಆಗಮಿಸಿದ್ದು, ಈ ವೇಳೆ ಸ್ಥಳೀಯ ಕಾರ್ಪೊರೇಟರ್ ಹಾಗೂ ಸಂಘಟನೆಯವರ ನಡುವೆ ಮಾತಿನ ಚಕಮಕಿ ನಡೆದಿದೆ. ಯಾವುದೇ ರೀತಿಯ ನೋಟಿಸ್ ಅಥವಾ ಮುಂಚಿತ ಮಾಹಿತಿ ನೀಡದೆ ಸ್ಥಳಕ್ಕೆ ಬಂದು ಸರ್ವೇ ನಡೆಸುತ್ತಿರುವುದಕ್ಕೆ ಸ್ಥಳೀಯ ಕಾರ್ಪೊರೇಟರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನನಗೆ ಯಾವುದೇ ನೋಟಿಸ್ ಅಥವಾ ಮಾಹಿತಿ ನೀಡದೆ ನೀವು ಇಲ್ಲಿ ಬಂದು ಹೇಗೆ ಸರ್ವೇ ಮಾಡುತ್ತೀರಿ? ಇದನ್ನು ನಾನು ತಡೆಗಟ್ಟುತ್ತೇನೆ” ಎಂದು ಕಾರ್ಪೊರೇಟರ್ ಪ್ರಶ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಕೆಲಕಾಲ ವಾಗ್ವಾದದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಕಾನೂನು ಪ್ರಕಾರ ಅಗತ್ಯವಿರುವ ಪ್ರಕ್ರಿಯೆಗಳನ್ನು ಕೈಗೊಳ್ಳುವಂತೆ ಸೂಚಿಸಿದ ಪೊಲೀಸರು, ಸಂಬಂಧಪಟ್ಟ ಎರಡೂ ಕಡೆಯವರಿಗೆ ನೋಟಿಸ್ ನೀಡುವಂತೆ ತಿಳಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಈಗಾಗಲೇ ರಸ್ತೆ ನಿರ್ಮಾಣ ಹಾಗೂ ಜಾಗದ ವಿಚಾರವಾಗಿ ವಿವಾದಕ್ಕೆ ಒಳಗಾಗಿರುವ ಆಸಾರ ಓಣಿ ಪ್ರದೇಶದಲ್ಲಿ ಇದೀಗ ಸರ್ವೇ ವಿಚಾರವೂ ಹೊಸ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

