ಹುಬ್ಬಳ್ಳಿ: ಸಮಾಜಸೇವೆಯ ಮೂಲಕ ಯುವಕರ ಕಣ್ಮಣಿಯಾಗಿರುವ ವೆಂಕಟೇಶ್ ಅಶೋಕ್ ಕಾಟವೇ ಅವರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯ ತಾಜ್ಬಾಂಪೇಟೆಯ ದುರ್ಗಾದೇವಿ ಸಭಾಂಗಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಬುಧವಾರ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವೂ ನಡೆಯಿತು. ಇದೇ ವೇಳೆ ಪೌರಕಾರ್ಮಿಕರು ಹಾಗೂ ಮಾಜಿ ಸೈನಿಕರನ್ನು ಸನ್ಮಾನಿಸುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಿಗೆ ವಿಶೇಷ ಮೆರುಗು ನೀಡಲಾಯಿತು. ಕಾರ್ಯಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ದುರ್ಗಮ್ಮ ಶಶಿಕಾಂತ್ ಬಿಜವಾಡ್, ಬಿಜೆಪಿ ಯುವ ಮುಖಂಡ ಶಶಿಕಾಂತ್ ಬಿಜವಾಡ್, ಅಶೋಕ್ ಕಾಟವೇ, ಮೂರುಸಾವಿರ ಮಠದ ಗುರುಗಳು ಸೇರಿದಂತೆ ಅನೇಕ ಗಣ್ಯರು ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ ಕಾಟವೇ, “ನನ್ನ ಮಗನ ಜನ್ಮದಿನಕ್ಕೆ ಶುಭಾಶಯ ತಿಳಿಸಿದ ಎಲ್ಲ ಗಣ್ಯರು, ಮುಖಂಡರು ಹಾಗೂ ಸಮಾಜದ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಸಮಾಜಮುಖಿ ಕಾರ್ಯಗಳ ಮೂಲಕ ಜನರೊಂದಿಗೆ ಬೆರೆಯುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ,” ಎಂದು ಹೇಳಿದರು. ಬಳಿಕ ಮಾತನಾಡಿದ ವೆಂಕಟೇಶ್ ಅಶೋಕ್ ಕಾಟವೇ, “ನನ್ನ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸಿಕೊಳ್ಳುವುದು ನನ್ನ ಉದ್ದೇಶ. ಇದಕ್ಕೆ ನನ್ನ ತಂದೆ ಅಶೋಕ್ ಕಾಟವೇ ಅವರೇ ನನಗೆ ಸ್ಪೂರ್ತಿ. ಡಿಜೆ, ಕೇಕ್ ಕಟ್ ಮಾಡುವುದೇ ನಮ್ಮ ಸಂಪ್ರದಾಯವಲ್ಲ. ಅದರ ಬದಲು ಸಮಾಜಕ್ಕೆ ಉಪಯೋಗವಾಗುವ ಸೇವಾ ಕಾರ್ಯಗಳನ್ನು ಮಾಡುವುದೇ ನಿಜವಾದ ಸಂಭ್ರಮ. ಮುಂದಿನ ದಿನಗಳಲ್ಲಿಯೂ ಜನಸೇವೆಯನ್ನೇ ನನ್ನ ಪರಮ ಧರ್ಮವನ್ನಾಗಿ ಮಾಡಿಕೊಂಡು ಸಮಾಜದ ಸೇವೆಯಲ್ಲಿ ತೊಡಗಿರುತ್ತೇನೆ,” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೆಂಕಟೇಶ್ ಅಶೋಕ್ ಕಾಟವೇ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.

