ಕಲಘಟಗಿ:* ತಾಲೂಕಿನ ಆಲದಕಟ್ಟಿ ಗ್ರಾಮದ SC/ST ಕಾಲೋನಿಯಲ್ಲಿ ಗಟಾರ್, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು, ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಕಲಘಟಗಿ ತಾಲೂಕು ಘಟಕದ ವತಿಯಿಂದ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು. ಈ ವೇಳೆ ತಾಲೂಕು ಅಧ್ಯಕ್ಷ ರಮೇಶ ಹರಿಜನ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಮೈಲಾರಪ್ಪ ಹೊಸಮನಿ ಮಾತನಾಡಿ, “SC/ST ಕಾಲೋನಿಯ ಜನರಿಗೆ ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿಯದ್ದು. ಆದರೆ ಅಧಿಕಾರಿಗಳು ಅನುದಾನ ಇಲ್ಲ, ಯೋಜನೆ ಇಲ್ಲ ಎಂಬ ಕಾರಣಗಳನ್ನು ನೀಡುತ್ತಿದ್ದು, ಇದು ಸಮಂಜಸವಲ್ಲ. ಈ ಬಗ್ಗೆ ಪಿಡಿಒ (PDO) ಉತ್ತರ ನೀಡಬೇಕು,” ಎಂದು ಆಗ್ರಹಿಸಿದರು. ಸ್ಥಳೀಯ ಮುಖಂಡರಾದ ಮಲ್ಲಪ್ಪ ಹರಿಜನ, ಶಿವಪ್ಪ ಹರಿಜನ, ರವಿ ಹರಿಜನ, ಶಿದ್ದಪ್ಪ ಹರಿಜನ, ನಿಂಗಪ್ಪ ಹರಿಜನ ಹಾಗೂ ದ್ಯಾಮಣ್ಣ ವಾಲಿಕಾರ ಸೇರಿದಂತೆ ನಿವಾಸಿಗಳು ಕಾಲೋನಿಯ ವಿವಿಧ ಸಮಸ್ಯೆಗಳ ಕುರಿತು ಸಮಿತಿಯ ಪದಾಧಿಕಾರಿಗಳಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಸದಾ ಜನರ ಪರವಾಗಿ ನಿಂತು ಹೋರಾಟ ನಡೆಸಲಿದೆ ಎಂದು ಸಮಿತಿಯ ಮುಖಂಡರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ರಮೇಶ ಮಾದರ, ಜಿಲ್ಲಾ ಸಂಘಟನಾ ಸಂಚಾಲಕ ಮೈಲಾರಪ್ಪ ಮಾದರ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

