ಕುಂದಗೋಳ: ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಬಿಜೆಪಿ ಉತ್ತರ ಕರ್ನಾಟಕದ ಬರ ಅಧ್ಯಯನ ತಂಡವು ಬುಧವಾರ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ಎಂ.ಆರ್. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಲಿಂಗರಾಜ್ ಪಾಟೀಲ್ ಹಾಗೂ ಎನ್. ಮಲ್ಲಿಕಾರ್ಜುನ ಸೇರಿದಂತೆ ತಂಡದ ಸದಸ್ಯರು ರೈತರ ಅಹವಾಲುಗಳನ್ನು ಆಲಿಸಿದರು. ರೈತ ಮುಖಂಡ ಮಲ್ಲಿಕಾರ್ಜುನ ಸೊರಟೂರ ಮಾತನಾಡಿ, “ರೈತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಬಿಡಿಗಾಸು ಪರಿಹಾರ ನೀಡುವುದರಿಂದ ಪ್ರಯೋಜನವಿಲ್ಲ. ರೈತರಿಗೆ ಸಂಪೂರ್ಣ ಬೆಳೆ ವಿಮೆ ಹಾಗೂ ಸಮರ್ಪಕ ಬರ ಪರಿಹಾರ ನೀಡಬೇಕು. ಪರಿಹಾರದಲ್ಲಿ ತಾರತಮ್ಯ ಮಾಡಬಾರದು” ಎಂದು ಆಗ್ರಹಿಸಿದರು. ಈ ವೇಳೆ ಬಿಜೆಪಿ ಮುಖಂಡ ಎನ್. ರವಿಕುಮಾರ್ ಮಾತನಾಡಿ, “ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ನೀಡಬೇಕು. ಬೆಳೆಹಾನಿ ಸಮೀಕ್ಷೆ ವಿಳಂಬವಾಗಿದ್ದು, ಸರ್ಕಾರ ಕೂಡಲೇ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು. ಬರ ಅಧ್ಯಯನ ತಂಡವು ಬೆಳೆಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿತು.

