ಚಿಕ್ಕೋಡಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ. ಸುಮಾರು ಆರು ತಿಂಗಳ ಹಿಂದೆ ನಡೆದಿದ್ದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಮೃತನನ್ನು ರಾಘು ಗಾವಡೆ (40) ಎಂದು ಗುರುತಿಸಲಾಗಿದೆ. ಪತ್ನಿ ಬಂಗಾರಿ ಗಾವಡೆ ಹಾಗೂ ಆಕೆಯ ಪ್ರಿಯಕರ ರಾಮಾ ರಾಣಗೆ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಮಾಹಿತಿ ಪ್ರಕಾರ, ಬಂಗಾರಿ ಗಾವಡೆಗೆ ರಾಘು ಗಾವಡೆಯ ಸಹೋದರ ಸಂಬಂಧಿ ರಾಮಾ ರಾಣಗೆಯೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ಸಂಬಂಧಕ್ಕೆ ಗಂಡ ರಾಘು ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಲು ಇಬ್ಬರೂ ಸಂಚು ರೂಪಿಸಿದ್ದರು ಎನ್ನಲಾಗಿದೆ. ಕೂಲಿ ಕೆಲಸ ಹಾಗೂ ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ ರಾಘುವನ್ನು ಹೊಲದ ಕಡೆಗೆ ಕರೆಸಿಕೊಂಡು, ಪ್ರಿಯಕರನ ಸಹಾಯದಿಂದ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಪತಿ ಕುರಿ ಕಾಯಲು ಬೇರೆ ಜಿಲ್ಲೆಗೆ ತೆರಳಿದ್ದಾನೆ ಎಂದು ಪತ್ನಿ ಗ್ರಾಮಸ್ಥರನ್ನು ನಂಬಿಸಿದ್ದಳು ಎನ್ನಲಾಗಿದೆ. ಆದರೆ ರಾಘು ಕಾಣೆಯಾಗಿರುವ ಬಗ್ಗೆ ಆತನ ಸಹೋದರ ಲಗಮಣ್ಣ ಅವರಿಗೆ ಅನುಮಾನ ಮೂಡಿದ್ದು, ಗ್ರಾಮದ ಹಿರಿಯರ ಗಮನಕ್ಕೆ ತಂದಿದ್ದರು. ಈ ಕುರಿತು ವಿಚಾರಣೆ ನಡೆಸಿದಾಗ ಘಟನೆಗೆ ಸಂಬಂಧಿಸಿದ ಸತ್ಯ ಹೊರಬಂದಿದೆ ಎನ್ನಲಾಗಿದೆ. ಬಳಿಕ ಲಗಮಣ್ಣ ಅವರು ಖಡಕಲಾಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆ ಕೈಗೊಂಡ ಖಡಕಲಾಟ ಠಾಣೆ ಪೊಲೀಸರು ಬಂಗಾರಿ ಗಾವಡೆ ಹಾಗೂ ರಾಮಾ ರಾಣಗೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

