ಹುಬ್ಬಳ್ಳಿ: ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ, ಧಾರವಾಡ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 15ರಂದು ಸಂಗೊಳ್ಳಿ ರಾಯಣ್ಣ ಅವರ 232ನೇ ಜಯಂತ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ–2026 ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ–2026 ಪ್ರದಾನ ಮಾಡಲಾಗುವುದು. ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಹರ್ಷಾ ಕುಲಕರ್ಣಿ, ಬಸವರಾಜ ಗರಗ, ಮೈಲಾರಪ್ಪ ಕರಿಲಿಂಗಣ್ಣನವರ, ಮುಕುಂದ ಕುಲಕರ್ಣಿ, ಸುಭಾಷ ಡೆಂಕ್, ಶ್ರೀಪಾದ ಕುಲಕರ್ಣಿ, ಸಮಾಜ ಸೇವಕ ಸಹದೇವಪ್ಪ ಅಮ್ಮಿನಭಾವಿ ಹಾಗೂ ಜಾನಪದ ಕಲಾವಿದ ಲಾಲಸಾಬ ಮಲಿಕಸಾಬ ಪಶುಪತಿಹಾಳ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣನವರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

