ಛಬ್ಬಿಯಲ್ಲಿ ಚಾತುರ್ಮಾಸ ಮಂಗಳ ಕಳಶ ಸ್ಥಾಪನೆ ಅದ್ದೂರಿ; ತಗಡಿನ ಪೆಂಡಾಲ್ನ ಸಂಪೂರ್ಣ ವೆಚ್ಚ ಭರಿಸುವುದಾಗಿ ಶಾಸಕ ಎಂ.ಆರ್. ಪಾಟೀಲ ಘೋಷಣೆ ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ರತ್ನತ್ರಯ ಧರ್ಮನಗರಿ ಛಬ್ಬಿ ಗ್ರಾಮದಲ್ಲಿ ನಡೆಯುತ್ತಿರುವ ಪ.ಪೂ. ಬಾಲಾಚಾರ್ಯ 1008 ಡಾ. ಶ್ರೀ ಸಿದ್ಧಸೇನ ಮುನಿಮಹಾರಾಜರವರ ಪಾವನ ವರ್ಷಾಯೋಗ-2026ರ ಚಾತುರ್ಮಾಸ ಕಾರ್ಯಕ್ರಮದ ಅಂಗವಾಗಿ ಮಂಗಳ ಕಳಶ ಸ್ಥಾಪನೆ ಸಮಾರಂಭ ಭಾನುವಾರ ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಬಾಲಾಚಾರ್ಯ 1008 ಡಾ. ಶ್ರೀ ಸಿದ್ಧಸೇನ ಮುನಿಮಹಾರಾಜರವರು ಚಾತುರ್ಮಾಸದ ಮಂಗಳ ಕಳಶವನ್ನು ಪ್ರತಿಷ್ಠಾಪಿಸಿ ಆಶೀರ್ವಚನ ನೀಡಿದರು. ಧಾರ್ಮಿಕ ವಿಧಿ-ವಿಧಾನಗಳು, ಅಭಿಷೇಕ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ನೆರವೇರಿದವು. ಕಾರ್ಯಕ್ರಮವನ್ನು ಕುಂದಗೋಳ ಕ್ಷೇತ್ರದ ಶಾಸಕ ಎಂ.ಆರ್. ಪಾಟೀಲ ಉದ್ಘಾಟಿಸಿ ಮಾತನಾಡಿ, ಛಬ್ಬಿ ಗ್ರಾಮವು ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಇಂತಹ ಪುಣ್ಯಮಯ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸುವ ಅವಕಾಶ ದೊರೆತಿರುವುದು ತಮ್ಮ ಪೂರ್ವಜನ್ಮದ ಪುಣ್ಯದ ಫಲ ಎಂದು ಹೇಳಿದರು. ಪೂಜ್ಯ ಮುನಿಗಳ ಆಶೀರ್ವಾದ ಸದಾ ತಮ್ಮ ಮೇಲಿದ್ದು, ಛಬ್ಬಿ ಭಾಗದ ಜನತೆ ಬಹುಮತದಿಂದ ತಮ್ಮನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿರುವುದಕ್ಕೆ ತಾವು ಸದಾ ಚಿರಋಣಿಯಾಗಿರುವುದಾಗಿ ತಿಳಿಸಿದರು. ಅಲ್ಲದೆ, ಸ್ವಾಮೀಜಿಗಳು ಸೂಚಿಸುವ ಸಮಾಜಮುಖಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಚಾತುರ್ಮಾಸದ ನಾಲ್ಕು ತಿಂಗಳ ಅವಧಿಗೆ ನಿರ್ಮಿಸಲಾಗಿರುವ ತಗಡಿನ ಪೆಂಡಾಲ್ನ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಶಾಸಕ ಎಂ.ಆರ್. ಪಾಟೀಲ ಘೋಷಣೆ ಮಾಡಿದರು. ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ಜೈನ ಸಮಾಜ ಹಾಗೂ ಗ್ರಾಮಸ್ಥರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜೈನ ಸಮಾಜದ ಮುಖಂಡರು, ಗಣ್ಯರು, ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ರಾವಕ-ಶ್ರಾವಕಿಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿ ಪೂಜ್ಯ ಮುನಿಗಳ ಆಶೀರ್ವಾದ ಪಡೆದರು.

