ಧಾರವಾಡ: ನಗರದ ಟೋಲನಾಕಾ ಬಳಿಯ ಐನಾಕ್ಸ್ ಪಕ್ಕದ ಖಾಲಿ ಜಾಗದಲ್ಲಿ ಯುವಕನೋರ್ವನನ್ನು ಹರಿತವಾದ ಆಯುಧದಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹತ್ಯೆಯಾದ ಯುವಕನನ್ನು ಲಕ್ಷ್ಮೀಸಿಂಗನಕೇರಿ ನಿವಾಸಿ, 25 ವರ್ಷದ ಹನಮಂತಪ್ಪ ರಾಮಣ್ಣ ಅಣ್ಣಿಗೇರಿ ಎಂದು ಗುರುತಿಸಲಾಗಿದೆ. ಐನಾಕ್ಸ್ ಸಮೀಪದ ಖಾಲಿ ಜಾಗದಲ್ಲಿ ಯುವಕನ ರಕ್ತಸಿಕ್ತ ದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಯುವಕನ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಹರಿತವಾದ ಆಯುಧದಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಯಾವ ಸಮಯದಲ್ಲಿ ನಡೆದಿದೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಯುವಕನನ್ನು ಯಾರು, ಯಾವ ಕಾರಣಕ್ಕಾಗಿ ಹತ್ಯೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ವಿದ್ಯಾಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಹತ್ಯೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇನ್ನು ಮೃತ ಯುವಕನ ಪರಿಚಯಸ್ಥರು, ಸ್ನೇಹಿತರು ಹಾಗೂ ಆತನೊಂದಿಗೆ ಇತ್ತೀಚೆಗೆ ಸಂಪರ್ಕದಲ್ಲಿದ್ದವರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ. ಹತ್ಯೆಗೆ ವೈಯಕ್ತಿಕ ದ್ವೇಷ ಕಾರಣವೇ? ಹಣಕಾಸಿನ ವಿಚಾರವೇ? ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ? ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕನನ್ನು ಕೊಲೆ ಮಾಡಿದ ಆರೋಪಿಗಳು ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುವ ಸಾಧ್ಯತೆಯಿದೆ. ಘಟನೆಯಿಂದ ಟೋಲನಾಕಾ ಹಾಗೂ ಐನಾಕ್ಸ್ ಸುತ್ತಮುತ್ತ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ವಿದ್ಯಾಗಿರಿ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದು, ಹತ್ಯೆಯ ಹಿಂದಿನ ನಿಖರ ಕಾರಣ ಹಾಗೂ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ. #dharwad #dharwadnews #breakingnews #murdernews #crimenews #karnatakanews #kannadanews #dharwadmurder #latestnews #Public5News #kannadabreakingnews

